ಮಂಗರಸ 3 =
	ಸುಮಾರು 1508. ಜೈನಕವಿ. ಕನ್ನಡದಲ್ಲಿ ಸಮ್ಯಕ್ತ್ವಕೌಮುದಿ, ನೇಮಿಜಿನೇಶ ಸಂಗತಿ (ಹರಿವಂಶಪುರಾಣ), ಪ್ರಭಂಜನ ಚರಿತೆ, ಜಯನೃಪಕಾವ್ಯ, ಶ್ರೀಪಾಲಚರಿತೆ ಮತ್ತು ಸೂಪಶಾಸ್ತ್ರ ಎಂಬ ಆರು ಗ್ರಂಥಗಳನ್ನು ರಚಿಸಿದ ಈ ಕವಿಯನ್ನು ಸಾಹಿತ್ಯಚರಿತ್ರೆಯಲ್ಲಿ ಮೂರನೆಯ ಮಂಗರಸ ಎಂದು ಗುರುತಿಸಲಾಗಿದೆ. ಈತ ಚೆಂಗಾಳ್ವ ಅರಸರ ಸಚಿವಕುಲಕ್ಕೆ ಸೇರಿದವ. ಜೈನಧರ್ಮಕ್ಕೆ ಸೇರಿದ ಈತ ಧಾತುಪುರದ ಅರಸನಾಗಿದ್ದ. ಈಗಿನ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಚಿಲಕುಂದ ಹೋಬಳಿಯ ಕಲ್ಲಹಳ್ಳಿಯೆ ಧಾತುಪುರ. ಇಂದಿಗೂ ಕಲ್ಲಹಳ್ಳಿಯಲ್ಲಿ ಮಂಗರಸನ ವಂಶಸ್ಥರು ಕಟ್ಟಿಸಿದ ಚಂದ್ರನಾಥ ಬಸದಿ ಮತ್ತು ಆ ವಂಶಸ್ಥರನ್ನು ಕಾಣಬಹುದು. ಈತನ ಅಜ್ಜ ಮಾಧವ. ತಂದೆ ಧಾತುಪುರದ ಪ್ರಭುವಾಗಿದ್ದ ವಿಜಯೇಂದ್ರ. ತಾಯಿ ದೇವಿಲೆ. ಗುರು ಚಿಕ್ಕಪ್ರಭೇಂದು. ಕವಿಗೆ ಪ್ರಭುರಾಜ, ಪ್ರಭುಕುಲ ರತ್ನದೀಪ ಎಂಬ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಪೂರ್ವಕವಿಗಳಲ್ಲಿ ಪಂಪ, ಪೊನ್ನ, ರನ್ನ, ಶ್ರೀವಿಜಯ, ಗುಣವವರ್ಮ, ಜನ್ನ, ಮಧುರ, ನಾಗಚಂದ್ರ, ಕರ್ಣಪಾರ್ಯ, ನೇಮಿಚಂದ್ರ, ಬಂಧುವರ್ಮ- ಇವರನ್ನು ಸ್ತುತಿಸಿದ್ದಾನೆ.

	ಈತನ ಕೃತಿಗಳಲ್ಲಿ ಹರಿವಂಶಪುರಾಣ; ಶ್ರೀಪಾಲಚರಿತೆ, ಪ್ರಭಂಜನ ಚರಿತೆಗಳು ಸಾಂಗತ್ಯದಲ್ಲಿದೆ. ಸಮ್ಯಕ್ತ್ವಕೌಮುದಿ ಮತ್ತು ಸೂಪಶಾಸ್ತ್ರ ವಾರ್ಧಕ ಷಟ್ಪದಿಯಲ್ಲೂ ಜಯನೃಪಕಾವ್ಯ ಪರಿವರ್ಧಿನೀ ಷಟ್ಪದಿಯಲ್ಲೂ ರಚಿತವಾಗಿವೆ. ಈ ಆರುಕೃತಿಗಳೇ ಅಲ್ಲದೆ ಮಂಗರಸನ ಹೆಸರಿಗೆ ಮನ್ಮಥಚರಿತೆ, ಕರ್ನಾಟಕ ಶಬ್ದಮಂಜರಿ, ಸನತ್ಕುಮಾರಚರಿತೆ ಮತ್ತು ರಾಮಸಂಗೀತವೆಂಬ ನಾಲ್ಕು ಗ್ರಂಥಗಳನ್ನು ಸೇರಿಸಲಾಗಿದೆ. ಆದರೆ ಈ ಗ್ರಂಥಗಳನ್ನು ಇವನು ಬರೆದಿದ್ದನೆಂಬುದಕ್ಕೆ ಆಧಾರಗಳಿಲ್ಲ.	 (ಎಸ್.ಎಚ್.ಸಿ.)

	ನೇಮಿಜಿನೇಶ ಸಂಗತಿ ಅಥವಾ ಹರಿವಂಶಪುರಾಣದಲ್ಲಿ 35 ಸಂಧಿಗಳೂ, 5,138 ಪದ್ಯಗಳೂ ಇವೆ. 22ನೆಯ ತೀರ್ಥಂಕರ ನೇಮಿನಾಥನ ಕಥೆ ಕಾವ್ಯವಸ್ತು. ಇದರ ಜೊತೆಗೆ ಕುರುವಂಶದ ಮತ್ತು ಹರಿವಂಶದ ಕಥೆಗಳೂ ಸೇರಿಕೊಂಡಿವೆ. ಕವಿ ಕಥೆಗೆ ಆಕರವಾಗಿ ಚಾವುಂಡರಾಯ ಪುರಾಣವನ್ನು ಆಧರಿಸಿರುವಂತೆ ತೋರುತ್ತದೆ. ಅಲ್ಲಲ್ಲಿ ನೇಮಿಚಂದ್ರನನ್ನು ಅನುಸರಿಸಿರುವಂತೆಯೂ ಕಾಣುತ್ತದೆ. ಕೆಲವು ವರ್ಣನೆಗಳು ರಸವತ್ತಾಗಿವೆ. ಕಥನಗತಿಯಲ್ಲಿ ನಿರರ್ಗಳತೆ ಇದೆ. ಪಾತ್ರ ಚಿತ್ರಣ ಜೀವಂತವೆನಿಸುತ್ತದೆ. ಸಾಂಗತ್ಯ ಶೈಲಿಯಲ್ಲಿ ಸರಳತೆ, ಲಾಲಿತ್ಯ, ರಮ್ಯತೆ ಕಂಡುಬರುತ್ತದೆ.

	ಪ್ರಭಂಜನ ಚರಿತ್ರೆಯಲ್ಲಿ ಶಂಭು ದೇಶದ ರಾಜ ಭಂಭಾಪುರದ ರಾಜ ದೇವಸೇನನ ಮಗ ಪ್ರಭಂಜನನ ಕಥೆ ನಿರೂಪಿತವಾಗಿದೆ. ಇದರೊಂದಿಗೆ ಎಂಟುಜನ ಮುನಿಗಳ ಕಥೆಯೂ ಸೇರಿದೆ. ದೊರೆತ ಅಸಮಗ್ರ ಪ್ರತಿಯಲ್ಲಿ 5 ಸಂಧಿಗಳೂ 606 ಪದ್ಯಗಳೂ ಇವೆ. ಕಥಾತಂತ್ರ ಸ್ವಾರಸ್ಯವಾಗಿದೆ. ಶೃಂಗಾರ ವರ್ಣನೆ ಕೆಲವೊಮ್ಮೆ ಅತಿಯಾಗಿದೆ. ಹೆಣ್ಣು ಅಡ್ಡದಾರಿ ಹಿಡಿದಾಗ ಒದಗುವ ದುಷ್ಟಪರಿಣಾಮವನ್ನು ಚಿತ್ರಿಸುವುದು ಕವಿಯ ಉದ್ದೇಶ.

	ಶ್ರೀಪಾಲ ಚರಿತೆಯಲ್ಲಿ 14 ಸಂಧಿಗಳೂ, 1527 ಪದ್ಯಗಳು ಇವೆ. ಪುಂಡರೀಕಿಣೀಪುರದ ದೊರೆ ಗುಣಪಾಲನ ಮಗ ಶ್ರೀಪಾಲನ ಕಥೆ ಇದರ ಕಾವ್ಯವಸ್ತು. ವರ್ಣನೆಗಳಲ್ಲಿ ನಾವೀನ್ಯ ಇದೆ. ಸ್ತ್ರೀವರ್ಣನೆಗಳು ಅಧಿಕವಾಗಿವೆ.

	ಸೂಪಶಾಸ್ತ್ರ ಅಡುಗೆ ವಿಧಿ ವಿಧಾನಗಳನ್ನು ತಿಳಿಸುವ ಗ್ರಂಥ. ಕನ್ನಡ ದೇಸೀ ಛಂದಸ್ಸಿನಲ್ಲಿ ಪಾಕಶಾಸ್ತ್ರ ಕುರಿತು ಬರೆದ ಮೊತ್ತಮೊದಲ ಕೃತಿ. ಇದು ಸಂಸ್ಕøತ ಗ್ರಂಥವೊಂದರ ಅನುವಾದವೆಂದು ತಿಳಿಯುತ್ತದೆ. ಇದರಲ್ಲಿ 6 ಅಧ್ಯಾಯಗಳೂ 450 ಪದ್ಯಗಳೂ ಇವೆ. ತನ್ನ ಗ್ರಂಥ ನಳ, ಭೀಮ ಮುಂತಾದ ಬಾಣಸ ವಿದ್ಯಾನಿಪುಣರ ಮತಾನುಸಾರವಾಗಿದೆಯೆಂದೂ ಹೆಣ್ಣು ಮಕ್ಕಳಿಗೆ ಬಹಳ ಪ್ರಿಯವಾದ ಗ್ರಂಥವೆಂದೂ ಇದರಿಂದ ಓದುಗರಿಗೆ ಇಹಪರಗಳು ಲಭಿಸುವವೆಂದೂ ಕವಿ ಹೇಳಿಕೊಂಡಿದ್ದಾನೆ. ಇಲ್ಲಿ ಪಿಷ್ಟ, ಪಾಕ, ಕಳಮಾನ್ನಪಾಕ, ಶಾಕಪಾಕ ಇತ್ಯಾದಿ ಷಡ್ರಸಗಳ ವಿಷಯ ಪ್ರತಿಪಾದಿತವಾಗಿದ್ದು ಘರಿವಿಳಂಗಾಯಿ ಹಾಲಗಾರಿಗೆ ಪವಡುರೊಟ್ಟಿ, ಹಿಮಾಂಬುವಾನ ಮೊದಲಾದವನ್ನು ತಯಾರಿಸಲು ಹೇಳಿರುವ ವಿಧಾನಗಳು ಆಕರ್ಷಕವಾಗಿವೆ.

	ಜಯನೃಪಕಾವ್ಯ 16 ಸಂಧಿ, 1145 ಪದ್ಯಗಳನ್ನು ಒಳಗೊಂಡಿರುವ ಕೃತಿ. ಕುರುಜಾಂಗಣ ವಿಷಯದ ರಾಜ ರಾಜಪ್ರಭದೇವನ ಮಗ ಜಯನೃಪನ ಕಥೆ ಕಾವ್ಯ ವಸ್ತು. ಕವಿ ಇದರಲ್ಲಿ ಸಂಸ್ಕøತ ಕನ್ನಡಗಳ ಬಳಕೆಯಲ್ಲಿ ಸಾಮರಸ್ಯ ಸಾಧಿಸಿದ್ದಾನೆ. ಕಾವ್ಯ ಶೃಂಗಾರಪೂರಿತವಾಗಿದೆ. ಶೈಲಿ ಲಲಿತವಾಗಿದೆ.

	ಸಮ್ಯಕ್ತ್ವಕೌಮುದಿ 12 ಸಂಧಿಗಳು 792 ಪದ್ಯಗಳನ್ನು ಒಳಗೊಂಡಿದೆ. ಇದನ್ನು 1508ರಲ್ಲಿ ಬರೆದು ಮುಗಿಸಿದಂತೆ ತಿಳಿಯುತ್ತದೆ. ಉದಿತೋದಯ ರಾಜ, ಅರ್ಹದ್ದಾಸನೆಂಬ ವೈಶ್ಯವಿಭುವಿನ ಸ್ತ್ರೀಯರು ಹೇಳಿದ ಕಥೆ ಕೇಳಿ ಸಮ್ಯಕ್ತ್ವ ಧರಿಸಿ, ದೀಕ್ಷೆ ವಹಿಸಿ ಸ್ವರ್ಗಸ್ಥನಾದ ಎಂಬುದು ಕಾವ್ಯವಸ್ತು. ಇದೊಂದು ಧಾರ್ಮಿಕಗ್ರಂಥ, ಸಮ್ಯಗ್ದರ್ಶನದ ಮಹತ್ತ್ವವನ್ನು ನಿರೂಪಿಸುವುದು ಕೃತಿಯ ಮುಖ್ಯ ಉದ್ದೇಶ.							

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ